ಬ್ರೌನ್, ತಾಮಸ್
	1605-82. ಇಂಗ್ಲಿಷ್ ಸಾಹಿತಿ. 1605 ಅಕ್ಟೋಬರ್ 19ರಂದು ಜನಿಸಿದ. ಆಕ್ಸ್‍ಫರ್ಡಿನಲ್ಲಿ ವಿದ್ಯಾಭ್ಯಾಸಮಾಡಿ 1626ರಲ್ಲಿ ಬಿ.ಎ. ಪದವಿಯನ್ನೂ 1629ರಲ್ಲಿ ಎಂ.ಎ. ಪದವಿಯನ್ನೂ ಗಳಿಸಿದ. ಲೇಡ್ನನಲ್ಲಿ ವೈದ್ಯಶಾಸ್ತ್ರದ ಬಗ್ಗೆ ಅಧ್ಯಯನ ನಡೆಸಿ 1633ರಲ್ಲಿ ಎಂ.ಡಿ. ಪದವಿ ಗಳಿಸಿದ. ಅನಂತರ ಹ್ಯಾಲಿಫಾಕ್ಸ್‍ಗೆ ಹಿಂದಿರುಗಿ ವೈದ್ಯಕೀಯ ವೃತ್ತಿಯಲ್ಲಿ ನಿರತನಾದ. ಇಲ್ಲಿದ್ದ ಸಂದರ್ಭದಲ್ಲಿ ರಿಲಿಜಿಯೋ ಮಿಡಿಚಿ ಎಂಬ ಕಾವ್ಯ ರಚಿಸಿದ್ದನಾದರೂ ಅದು ಪ್ರಕಟವಾದದ್ದು 1643ರಲ್ಲಿ. ರಿಲಿಜಿಯೊ ಮೆಡಿಚಿಯಲ್ಲಿ ಧಾರ್ಮಿಕ ನಂಬಿಕೆಗಳನ್ನು ಸ್ಫುಟಗೊಳಿಸುವ ಪ್ರಯತ್ನ ಮಾಡಿದ್ದಾನೆ. ಹೈಡ್ರಿಯೋಟೇಫಿ ಆರ್ ಅರ್ನ್ ಬರಿಯಲ್ (1658) ಇವನ ಇನ್ನೊಂದು ಪ್ರಸಿದ್ಧ ಕೃತಿ. ಸಾವು ಮತ್ತು ಶಾಶ್ವತತೆ ಕುರಿತು ಈ ಕೃತಿಯಲ್ಲಿ ಗಾಢವಾಗಿ ಚಿಂತಿಸಿದ್ದಾನೆ. ಇವನ ಶೈಲಿ ಗಂಭೀರವಾದುದು. ಲ್ಯಾಟಿನ್ ಪದಗಳಲ್ಲಿ ಇವನಿಗೆ ಹೆಚ್ಚು ಆದರ. ಬರಹಗಳಲ್ಲಿ ಉದ್ದವಾದ ಮತ್ತು ಕಿವಿಗೆ ಸೊಗಸುವ ಪದ ವೈಭವ ಕಾಣಬರುತ್ತದೆ. ಆದರೆ ದಿನನಿತ್ಯದ ಅಗತ್ಯಗಳಿಂದ ಬಹು ದೂರ. ಆದರೆ ದಿನನಿತ್ಯದ ಅಗತ್ಯಗಳಿಗಿಂತ ಬಹುದೂರ ಲಯ ಮತ್ತು ಶಬ್ದ ಸಾಮರಸ್ಯಗಳ ವಿಷಯದಲ್ಲಿ ವಿಶೇಷ ಎಚ್ಚರಿಕೆ ವಹಿಸಿದ್ದಾನೆ. ಆದ್ದರಿಂದ ಇವನ ಗದ್ಯ ಶೈಲಿ ಒಮ್ಮೊಮ್ಮೆ ಕಾವ್ಯವನ್ನು ಸಮೀಪಿಸುತ್ತದೆ.

	ರಾಜನಿಗೂ ಸಂಸತ್ತಿಗೂ ಯಾದವೀಕಲಹವಾದಾಗ ಬ್ರೌನ್ ರಾಜನ ಪಕ್ಷ ವಹಿಸಿದ. 1671ರಲ್ಲಿ ರಾಜನು ಇವನಿಗೆ ನೈಟ್ ಹುಡ್ ಪ್ರಶಸ್ತಿಯನ್ನು ನೀಡಿದ. 1682 ಆಕ್ಟೋಬರ್ 19ರಂದು ನಾರ್‍ವಿಚ್‍ನಲ್ಲಿ ನಿಧನ ಹೊಂದಿದ.

	ಬ್ರೌನ್‍ನ ಗದ್ಯ ಸಾಹಿತ್ಯವು ಹತ್ತೊಂಬತ್ತನೆಯ ಶತಮಾನದ ಹಾಲ್ರ್ಸ್ ಲ್ಯಾಂಬ್, ಕೋಲ್‍ರಿಜ್ ಮತ್ತು ಡಿಕ್ವಿನ್ಸ್ ಮೊದಲಾದ ಬರಹಗಾರರ ಮೇಲೆ ಪ್ರಭಾವ ಬೀರಿತು.							(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ